ತಾಜ್ ಮಹಲ್ #Taj Mahal

        ಹೊಸ ಪ್ರಪಂಚದ 7 ಅದ್ಭುತಗಳಲ್ಲಿ ತಾಜ್‍ಮಹಲ್ ಒಂದಾಗಿದೆ. ಭಾರತೀಯರು ಇದನ್ನು ಪ್ರೀತಿಯ ಸಂಕೇತ ಎಂದೇ ಬಿಂಬಿಸಿದ್ದಾರೆ, ಜೊತೆಗೆ ಇದನ್ನು ಬಿಳಿ ಅಮೃತಶಿಲೆಯಿಂದ ನಿರ್ಮಿಸಲಾಗಿರುವುದರಿಂದ ಇಲ್ಲಿ ಬಿಳಿ ಶುದ್ಧತೆಯ ಸಂಕೇತ. ಹಾಗೆಯೇ ಪ್ರೀತಿಯಲ್ಲಿನ ಶುದ್ಧತೆಯ ಸಂಕೇತವಾಗಿಯೂ ತಾಜ್‍ನ ನೋಡಬಹುದು. ನಮ್ಮ ದೇಶಕ್ಕೆ ಬೇರೆ ದೇಶಗಳ ಮಹಾನ್ ನಾಯಕರು ಪತ್ನಿಯರ ಸಮೇತ ಬಂದರೆ ಇಲ್ಲಿಗೆ ಭೇಟಿ ನೀಡಿ ತಮ್ಮ ಫೋಟೊ ತೆಗೆಸಿಕೊಳ್ಳದೆ ಹಿಂದಿರುಗುವುದಿಲ್ಲ. ಹಾಗೆಯೇ ಈ ಸುಂದರ ಸ್ಮಾರಕವನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಪ್ರತಿ ವರ್ಷ 7 ರಿಂದ 8 ಮಿಲಿಯನ್ ಜನರು ಭೇಟಿ ನೀಡುತ್ತಾರೆ, ಇದರಿಂದ ನಮಗೆ ತಿಳಿಯುತ್ತೆ ತಾಜ್‍ಮಹಲ್ ಪ್ರಪಂಚದಾದ್ಯಂತ ಜನರನ್ನು ತನ್ನತ್ತ ಆಕರ್ಷಿಸುತ್ತದೆ. 

        ಇಂತಹ ಭವ್ಯ ಸ್ಮಾರಕವು ಉತ್ತರ ಪ್ರದೇಶದ ಆಗ್ರಾದಲ್ಲಿ ಯಮುನಾ ನದಿಯ ದಂಡೆಯ ಮೇಲೆ ಬಿಳಿ ಅಮೃತಶಿಲೆಯಿಂದ ನಿರ್ಮಾಣಗೊಂಡಿರುವ ಸಮಾಧಿಯಾಗಿದೆ. ಮುಮ್ತಾಜ್ ಮಹಲ್‍ಳ ನೆನಪಿಗಾಗಿ ಭವ್ಯವಾಗಿ ಷಹಜಹಾನ್ ನಿರ್ಮಿಸಿರುವ ಸ್ಮಾರಕವೂ ಹೌದು. ಇದು ಪರ್ಶಿಯನ್, ಭಾರತೀಯ, ಮುಸ್ಲಿಂ ವಾಸ್ತು ಶೈಲಿಗಳ ಸಂಗಮವಾಗಿ ಮೊಘಲ್ ವಾಸ್ತುಶಿಲ್ಪದಲ್ಲಿ ರಚಿಸಲಾಗಿದೆ. ಇದನ್ನು ಯುನೆಸ್ಕೊ 1983ರಲ್ಲಿ ವಿಶ್ವ ಪಾರಂಪರಿಕ ತಾಣವನ್ನಾಗಿ ಘೋಷಿಸಿ“ಭಾರತದಲ್ಲಿರುವ ಮೊಘಲರ ಕಲೆಯ ಅನಘ್ರ್ಯ ರತ್ನ ಮತ್ತು ಜಾಗತಿಕವಾಗಿ ಮೆಚ್ಚುಗೆಯನ್ನು ಪಡೆದ ವಿಶ್ವ ಪರಂಪರೆಯ ಮೇರು ಕೃತಿಗಳಲ್ಲಿ ಒಂದು” ಎಂದು ದಾಖಲಿಸಿದೆ. 

ಭವ್ಯ ಸಮಾಧಿಯ ಸ್ಮಾರಕವನ್ನು ಷಹಜಹಾನ್ 1632 ರಿಂದ ಪ್ರಾರಂಭಿಸಿ 1653ರಲ್ಲಿ ಪೂರ್ಣಗೊಳಿಸಿದ. ಇದರ ಮುಖ್ಯ ಶಿಲ್ಪಿ ಉಸ್ತಾದ್ ಅಹ್ಮದ್ ಲಹೌರಿ. ಇದು ಅಮೃತಶಿಲೆಯಿಂದ ನಿರ್ಮಿತವಾದ ಚೌಕಕಾರದ ಪೀಠದ ಮೇಲಿದ್ದು, ದೊಡ್ಡ ಗುಮ್ಮಟ ಮತ್ತು ಶಿಖರದಿಂದ ಚಾವಣಿ ಹೊಂದಿರುವ ಐವಾನ್‍ನೊಂದಿಗೆ ಒಳಗೊಂಡಿದೆ. ಇದು ಪಿಸ್ತಕ್‍ಗಳು, ಮಿನರಟ್ಟುಗಳಿಂದ ಸಮಾಧಿ ರಚನೆಯ ಜೊತೆಗೆ ಮಹಲಿನ ಮುಖ್ಯ ಕೋಣೆಯಲ್ಲಿ ನಕಲಿ ಶಿಲೆಗಳಿಂದ ಅಲಂಕೃತವಾದ ಮುಮ್ತಾಜ್ ಮಹಲ್ ಮತ್ತು ಷಹಜಹಾನ್‍ರ ಶಿಲಾ ಶವ ಪೆಟ್ಟಿಗೆಯಿದೆ. ನೈಜ ಸಮಾಧಿಗಳು ಕೆಳಮಟ್ಟದಲ್ಲಿವೆ. 

        ಸಮಾಧಿಯ ಮೇಲಿರುವ ಮಹಲ್ ಸಿಲಿಂಡರ್ ಅಕಾರದಂತೆ ಇರುವುದರಿಂದ ಇದನ್ನು ‘ಅಮೃದ್’ ಎಂದು ಕರೆಯಲಾಗುತ್ತೆ. ತುದಿ ಕಮಲದಾಕಾರದಲ್ಲಿದೆ. ಇದರ ಮೇಲಿನ ಪ್ರಮುಖ ಗೋಪುರ ಚಿನ್ನದಿಂದ ಮಾಡಲ್ಪಟ್ಟಿತ್ತು ಆದರೆ 19ನೇ ಶತಮಾನದಲ್ಲಿ ಕಂಚಿನ ಲೇಪಿತ ಗೋಪುರದಿಂದ ಬದಲಾಯಿತು. ಇದು ಪರ್ಶಿಯನ್, ಹಿಂದೂ ಶೈಲಿಗಳ ಸಮ್ಮಿಶ್ರಣವಾಗಿದೆ. ತಾಜ್‍ಮಹಲ್‍ನ ಹೊರಾಂಗಣ ಅಲಂಕಾರ ಮೊಘಲ್ ವಾಸ್ತುಶಿಲ್ಪದ ಉತ್ತಮ ಅಂಶಗಳಿಂದ ಕೂಡಿದ್ದು ಇಲ್ಲಿ ಕುರಾನ್‍ನ ಪಠ್ಯ ಭಾಗಗಳನ್ನು ಕೆತ್ತಿಸಲಾಗಿದೆ. ಒಳಾಂಗಣದಲ್ಲಿ ಶಿಲಾಲಿಖಿತ ರತ್ನಗಳಿಂದ ಕೂಡಿದ್ದು, ಜಾಲಿ(ಜಲಿ)ಯನ್ನು ಹೊಂದಿದೆ. 

        ಸ್ಮಾರಕದ ಮುಂದೆ ಛಾರ್ಬಾಘ್ ಗಾರ್ಡನ್ ಉದ್ಯಾನವನವಿದೆ. ಇಲ್ಲಿ ಸ್ಮಾರಕದ ಎದುರು ಇರುವ ನೀರಿನ ತೊಟ್ಟಿಯನ್ ಅಲ್ ಹವ್ದ್ ಅಲ್ ಕವ್ತಾರ್ ಎಂದು ಕರೆಯಲಾಗುತ್ತೆ. ಈ ಛಾರ್ಭಾಘ್ ಉದ್ಯಾನವನ್ನು ಮೊದಲಿಗೆ ಬಾಬರ್ ಭಾರತದಲ್ಲಿ ಪರಿಚಯಿಸಿದ. ಇದು ಜನ್ನಾ(ಸ್ವರ್ಗ)ದಲ್ಲಿ ಹರಿಯುವ ನಾಲ್ಕು ನದಿಗಳನ್ನು ಸೂಚಿಸುತ್ತದೆ. ಏಕೆಂದರೆ ನಾಲ್ಕು ಕಡೆಯಲ್ಲೂ ನೀರಿನ ತೊಟ್ಟಿಗಳ ವಿನ್ಯಾಸವನ್ನು ಕಾಣುತ್ತೇವೆ. ಇಂತಹ ಉದ್ಯಾನವನ್ನು ಸ್ವರ್ಗದಲ್ಲಿನ ಉದ್ಯಾನದಿಂದ ಸೃಷ್ಠಿಯಾದದ್ದು ಎಂದು ತಿಳಿಯಲಾಗಿದೆ. ನಾಲ್ಕು ಭಾಗಗಳಲ್ಲಿ ಉದ್ಯಾನವನವಿದ್ದು ನಡುವಲ್ಲಿ ಸ್ಮಾರಕವಿರುತ್ತೆ. ಇದು ಕೂಡ ಶಾಲಿಮಾರ್ ಉದ್ಯಾನವನಗಳಂತೆ ಕಾಣುತ್ತೆ. 

        ಈ ಕಟ್ಟಡ ನಿರ್ಮಾಣ ಮಾಡಲು ಏಷ್ಯಾದಾದ್ಯಂತ  ದೊರೆಯುವ ವಸ್ತುಗಳನ್ನು ಬಳಸಲಾಗಿದೆ. 1000ಕ್ಕಿಂತ ಹೆಚ್ಚು ಆನೆಗಳನ್ನು ಪದಾರ್ಥಗಳ ಸಾಗಾಣಿಕೆಗೆ ಬಳಕೆ, ರಾಜಸ್ಥಾನದಿಂದ ಬಿಳಿ ಅಮೃತಶಿಲೆ, ಪಂಜಾಬ್‍ನಿಂದ ಜ್ಯಾಸ್ಪರ್, ಚೀನಾದಿಂದ ಜೇಡ್ ಮತ್ತು ಸ್ಪಟಿಕ, ಅಫ್‍ಘಾನಿಸ್ತಾನದಿಂದ ಲ್ಯಾಪಿಸ್ ಲಜುಲಿ – ಶ್ರೀಲಂಕಾದಿಂದ ನೀಲಮಣಿ ಮತ್ತು ಅರೇಬಿಯಾದಿಂದ ಕ್ಯಾಲ್ಸಡೆನಿ ತರಿಸಿ ನಿರ್ಮಾಣ ಮಾಡಲಾಗಿತ್ತು. 

       1857ರವರೆಗೆ ವಿಜೃಂಭಿಸಿದ್ದ ತಾಜ್‍ಮಹಲ್ ತದನಂತರದಲ್ಲಿ ಬ್ರಿಟಿಷ್ ಅಧಿಕಾರಿ ಮತ್ತು ಸೈನಿಕರಿಂದ ತಾಜ್‍ಮಹಲ್ ಗೋಡೆ ಮೇಲಿದ್ದ ಲ್ಯಾಪಿಸ್ ಲಜುಲಿಯನ್ನು ಮೋಸದಿಂದ ತೆಗೆದುಕೊಂಡು ಹೋದರು. ನಂತರ ಇದರ ದುರವಸ್ಥೆ ಉಂಟಾಗಿ ಮುಂದೆ ಭಾರತಕ್ಕೆ ವೈಸ್‍ರಾಯ್ ಆಗಿ ಬಂದ ಲಾರ್ಡ್ ಕರ್ಜನ್ ಇದರ ಜೀರ್ಣೋದ್ಧಾರಕ್ಕೆ ಆದೇಶಿಸಿದ. ಇದು 1908ರಲ್ಲಿ ಪೂರ್ಣಗೊಂಡಿತು. ತದನಂತರ ಬ್ರಿಟಿಷ್ ಸರ್ಕಾರಗಳು ನೋಡಿಕೊಂಡವು. ಭಾರತ ಸ್ವಾತಂತ್ರ ನಂತರ ಇದರ ರಕ್ಷಣಾ ಕಾರ್ಯ ಹೆಚ್ಚಿ ಎಎಸೈ ಅಡಿಗೆ ಬಂದಿತು. ನಂತರ ದೇಶದಲ್ಲಿ ಉಂಟಾದ ಯುದ್ಧಗಳು ಮತ್ತು ತೈಲ ಸಂಸ್ಕರಣಾ ಘಟಕಗಳಿಂದ ಉಂಟಾಗುತ್ತಿರುವ ಆಮ್ಲ ಮಳೆ ಮತ್ತು ಮಲಿನಕಾರಕಗಳು ಇದಕ್ಕೆ ತೊಂದರೆ ಉಂಟು ಮಾಡುವ ಅಂಶಗಳಾಗಿವೆ. ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ವಾಯು ಮಾಲಿನ್ಯದಿಂದ ಇಂಥ ಭವ್ಯ ಸ್ಮಾರಕವನ್ನು ಕಳೆದುಕೊಳ್ಳಬೇಕಾಗುತ್ತೆ.  ಇದರಿಂದ ನಾವುಗಳು ಬೇಗ ಹೆಚ್ಚೆತ್ತುಕೊಂಡು ಇದರ ಉಳಿವಿಗೆ ಮುಂದಾಗಬೇಕಿದೆ. 

Leave a Comment

Your email address will not be published. Required fields are marked *

Scroll to Top