Poet of the Poem – Kuvempu
Suggi Barutide – Summary of the poem
Suggi Barutide – ಕುವೆಂಪು:ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ 29, 1904 ನವೆಂಬರ್ 11, 1994), ಕನ್ನಡದಅಗ್ರಮಾನ್ಯ ಕವಿ, ಮಹಾಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡ ಭಾಷೆಗೆ ತಮ್ಮ ಶ್ರೀ ರಾಮಾಯಣದರ್ಶನಂ ಮಹಾಕಾವ್ಯಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ (1967)ಯನ್ನು ಕೊಡಿಸಿದವರು. ಕವಿ. ಲೇಖಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿಗಳಾಗಿ ಕಾರ್ಯ ನಿರ್ವಹಿಸಿದವರು. ನವೋದಯ ಕಾವ್ಯ ಪರಂಪರೆಯಲ್ಲಿ ಸಾಹಿತ್ಯ ಕೃಷಿ ಮಾಡಿದ ಕುವೆಂಪು ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಾದ ಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ಶಿಶುಸಾಹಿತ್ಯ, ವಿಮರ್ಶೆ, ಆತ್ಮಕಥೆ, ಜೀವನಚರಿತ್ರೆ ಬರವಣಿಗೆ ಮಾಡಿದರು.ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಎಂಬ ಎರಡು ಬೃಹತ್ ಕಾದಂಬರಿಗಳನ್ನು ಕುವೆಂಪು ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ನೀಡಿದ್ದಾರೆ.ಪ್ರಮುಖ ಪ್ರಶಸ್ತಿಗಳು: ಜ್ಞಾನಪೀಠ ಪ್ರಶಸ್ತಿ, ಪದ್ಮ ವಿಭೂಷಣ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಪಂಪ ಪ್ರಶಸ್ತಿ, ‘ರಾಷ್ಟ್ರಕವಿ’. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ..
ಕವಿತೆಯ ಮೂಲಕ ಈ ಜಗಕ್ಕೆ ಸುಗ್ಗಿ ವಸಂತ ಋತುವಿನ ಆಗಮನವನ್ನು ಹೇಗೆ ಬರಮಾಡಿಕೊಳ್ಳಲಾಗುತ್ತಿದೆ ಎಂದು ಕವಿಯು ಹೇಳಿದ್ದಾರೆ.
ಅಡಿಯ ಗೆಜ್ಜೆ ನಡುಗೆ ಹೆಜ್ಜೆಯಿಡುತ ಸುಗ್ಗಿ ಬರುತಿದೆ!
ಸುಗ್ಗಿ ಬರೆ ಹಿಗ್ಗಿ ತಿರೆ ಸಗ್ಗಸೊಗವ ತರುತಿದೆ!
ಕಣಿವೆಯಿಳಿದು ತೆಮರನೇರಿ,
ತರುಗಳಲ್ಲಿ ತಳಿರ ಹೇರಿ,
ಹೊಸತು ಜೀವಕಳೆಯ ಬೀರಿ
ಸುಗ್ಗಿ ಮೂಡುತಿರುವುದು!
ಬನದ ಬಿನದದಿನಿದು ನಿನದ ಮನದೊಳಾಡುತಿರುವುದು!
ಕಾಲಿಗೆ ಗೆಜ್ಜೆಯ ಆಭರಣ ತೊಟ್ಟು ಭೂಮಿಯ ಮೇಲೆ ಹೆಜ್ಜೆಯಿಡುತ ವಸಂತ ಕಾಲವೂ ಬರುತ್ತಿದೆ. ವಸಂತ ಋತು ಬರುವುದರಿಂದ ಭೂಮಿಯು ಸ್ವರ್ಗದ ಅಮೃತವನ್ನು ತರುತ್ತಿದೆ. ಅದು ಕಣಿವೆಯನ್ನು ಇಳಿದು ದಿಣ್ಣೆಯನ್ನೇರಿ ಮರಗಳಲ್ಲಿ ಚಿಗುರನ್ನು ಮೂಡಿಸಿ ಅವೆಲ್ಲಕ್ಕೂ ಹೊಸತನದ ಜೀವದ ಕಳೆಯನ್ನು ನೀಡಿ ವಸಂತಋತು ಮೂಡುತಿದೆ. ಕಾಡಿನ ವಿನೋದ ಸಂತಸದ ಧ್ವನಿ ಮನದಲ್ಲಿ ನಲಿಯುವಂತೆ ವಸಂತಋತು ಆಗಮಿಸುತ್ತಿದೆ ಅಥವಾ ಮೂಡುತ್ತಿದೆ.
See the video about Hogogu: https://rvwritting.com/hogogu/
ಬಂಡನುಂಡುದುಂಬಿವಿಂಡು ಹಾಡುತಿಹವು ಹಾರುತ,
ಮತ್ತ ಮಧು ಮಾಸವಿದು ಬನ್ನಿರೆಂದು ಸಾರುತ.
ಜಾರುತಿಹುದುಮಾಗಿ ಚಳಿ,
ಕುಸುಮಿಸಿರುವ ಲತೆಗಳಲಿ
ಮೆರೆಯುತಿಹವು ಸೊಕ್ಕಿದಳಿ
ಮುಕ್ತಜೀವರಂದದಿ!
ಉಲಿಯೆ ಪಿಕ, ಗಳಪೆ ಶುಕ, ಸುಗ್ಗಿ ಬಂದಿತಂದದಿ!
ವಸಂತ ಕಾಲದಲ್ಲಿ ಮಕರಂದವನ್ನು ದುಂಬಿಯ ಗುಂಪು ಹೀರುತ್ತಾ ಹಾಡುತ್ತಿವೆ. ಹಾರಾಡುತ್ತಾ ಹೇಳುತ್ತಿವೆ ಉನ್ಮತ್ತವಾದ ಮಕರಂದದ ವಸಂತ ಋತುವು ಬರುತಿದೆ ಎಂದು ಸಾರಿ ಹೇಳುತ್ತಿವೆ. ಚಳಿಯು ನಿಧಾನವಾಗಿ ಬೀಸುತ್ತಾ ಹೂ ಬಿಡುವ ಬಳ್ಳಿಗಳಲ್ಲಿ ವಿಜೃಂಭಿಸಿ ಮೆರೆಯುತ್ತಿದೆ. ಪಕ್ಷಿ, ಗಿಳಿ ಎಲ್ಲವೂ ಕೂಗಿ ಹೇಳುತ್ತಿವೆ ಸುಗ್ಗಿ ವಸಂತ ಋತು ಬಂದಿದೆ.
Also read: https://rvwritting.com/navellaru-onde-jaathi/
ಮಾಮರಂಗಳಲಿ ವಿಹಂಗತತಿಯ ನಿಸ್ಸನಂಗಳಿಂ,
ತಳಿರ ಸೊಂಪನಲರಜೊಂಪನಾಂತ ಬನಬನಂಗಳಿಂ.
ನಲಿವ ಪಚ್ಚೆಯುಡೆಯನುಟ್ಟು,
ಅರಳಿದರಳುಗಳನು ತೊಟ್ಟು,
ಹಿಮದ ಮಣಿಯ ಮಾಲೆಯಿಟ್ಟು
ತಣಿದು ಸೋಲೆ ಕಣ್ಣನಂ
ಕರೆವಳೋವಿ ಬನದದೇವಿ ತನ್ನ ಸುಗ್ಗಿಯಾನಂ!
ಮರಗಳಲ್ಲಿ ಪಕ್ಷಿ ಸಂತತಿಯ ಇಂಪಾದ ಧ್ವನಿಯು ಮೂಡುತಿರೆ, ಕಾಡಿನಲ್ಲಿ ಮರಗಳ ಚಿಗುರು ಸೊಂಪಾಗಿ ಬೆಳೆಯುವುದು. ಕಾಡೇ ಹಸಿರು ಬಣ್ಣವನ್ನು ಹೊಂದಿದೆ ಎಂಬಂತೆ ನಲಿಯುತ್ತಾ ಅರಳಿದ ಹೂವುಗಳನ್ನು ತೊಟ್ಟು, ಮಂಜಿನ ಹನಿಯ ಮಾಲೆಯನ್ನು ಉಡುವಂತೆ ಮೂಡಿದೆ. ಅದೆಲ್ಲವನ್ನು ನೋಡುವ ಕಣ್ಣಿಗೆ ತಂಪು ತರುವಂತೆ ಕಾಡಿನ ದೇವತೆ ವಸಂತ ಋತು ವನ್ನು ಕರೆಯುತ್ತಿದ್ದಾಳೆ.
ಹಾರಿ ಮೆರೆವಜಾರಿ ಹರಿವತೊರೆಯತಂಪು ದಡದೊಳು,
ಮೇಲೆ ಭಾನುತೇಲೆ, ನಾನು ಕುಳಿತು ಮರದ ಬುಡದೊಳ
ತಿರೆಯ ಸಿರಿಯ ನೋಡುತಿರುವೆ:
ಕುರಿತು ಹಾಡ ಹಾಡುತಿರುವೆ;
ಸೊಬಗಿನೊಡನೆ ಕೂಡುತಿರುವೆ ಕರಗಿ ಮುಳುಗಿ ತೇಲುತ!
ತೊರೆದಗಂಡನೆದುರುಗೊಂಡಕೋಮಲೆಯನು ಹೋಲುತ!
ಅಮಲಿನಲ್ಲಿ ಹಾರಿ ಬರುವ, ಹರಿಯುವ ತೊರೆಯ ತಂಪು ದಡದಲ್ಲಿದ್ದು, ಮೇಲೆ ಮೋಡ ತೇಲುತ್ತಿರುವುದನ್ನು ನೋಡುತ್ತಾ ಮರದ ಬುಡದಲ್ಲಿ ಕುಳಿತು, ಭೂಮಿಯ ಸಿರಿವಂತಿಕೆಯನ್ನು ನೋಡುತ್ತಾ ಅದರ ಸೌಂದರ್ಯವನ್ನು ಕುರಿತು ಮನದಲ್ಲಿ ಕರಗಿ ಮುಳುಗಿ ತೇಲುತ ಹಾಡುತಿರುವೆ, ಅದು ಹೇಗಿದೆ ಎಂದರೆ ಬಿಟ್ಟು ಹೋದ ಗಂಡನ ಎದುರು ಮತ್ತೆ ಹೆಣ್ಣು ಬಂದಾಗ ಹೇಗೆ ಮನಸ್ಸಿನಲ್ಲಿ ಪ್ರೀತಿ ಚಿಗುರೊಡೆಯುತ್ತೋ ಹಾಗೆ ವಸಂತ ಋತು ಕೂಡ ಬರುತ್ತಿದೆ.
ತುರುಗಳೆಲ್ಲ ಮೇಯೆ, ಗೊಲ್ಲ ಬಸಿರಿಮರದ ನೆಳಲಲಿ
ಮಲಗಿಸಿಹನು ಮಧುವನವನು ಮುದವನುಲಿವ ಕೊಳಲಲಿ!
ನಿಂತು ಮೇವ ಮರೆತುಬಿಟ್ಟು,
ಕಿವಿಯನೆರಡ ನೆಟ್ಟಗಿಟ್ಟು,
ಗೊಲ್ಲನೆಡೆಗೆ ದಿಟ್ಟೆಯಿಟ್ಟು
ಬರೆದಚಿತ್ರದಂದದಿ
ಗವಿಗಳೆಲ್ಲ ಸವಿಯ ಸೊಲ್ಲನಾಲಿಸಿಹವು ಚಂದದಿ!
ಗಿರಿಗಳಿರಾ, ತೊರೆಗಳಿರಾ, ಎಲೆ ವಿಹಂಗಮಗಳಿರಾ,
ತರುಗಳಿರಾ, ಬನಗಳಿರಾ, ಮಗಮಗಿಪ ಸುಮಗಳಿರಾ,
ಸೊಬಗೆ ನನ್ನಿಎಂದು ಸಾರಿ;
ನನ್ನಿಯೆ ಸೊಬಗೆಂದುತೋರಿ;
ಸೊಗದ ಸೊದೆಯತಿರೆಗೆ ಬೀರಿ,
ಒಳ್ಳೆ ಸೊಬಗು ಸೊಗದಲಿ
ಪರಮಪುರುಷನಮಲ ಹರುಷವಿಹುದ ಸಾರಿಜಗದಲಿ!
ದನಗಳೆಲ್ಲ ಮೇಯುವಾಗ ಗೊಲ್ಲನು ಹಸುಗಳನ್ನು ಮೇಯಿಸುತ್ತಾ ಬಸರಿಮರದ ನೆರಳಲ್ಲಿ ಉನ್ಮತ್ತವಾದ ಕೊಳಲನ್ನು ಓದುತ್ತಾ ಕೊಳಲಿನ ನಾದಕ್ಕೆ ಹಸುಗಳೆಲ್ಲ ಮೇವುವುದನ್ನು ಬಿಟ್ಟು ಕೊಳಲಿನ ನಾದವ ಬರುವ ಕಡೆಗೆ ಕಿವಿಯ ನೆಟ್ಟು ಆ ಕಡೆಗೆ ನೋಡುತ್ತಿವೆ. ಅಲ್ಲಿಯೇ ಆಶ್ರಯ ಪಡೆದಿದ್ದ ಪಕ್ಷಿ ಪ್ರಾಣಿಗಳೆಲ್ಲವೂ ಇಂಪಾದ ಧ್ವನಿಯನ್ನು ಚಂದದಿಂದ ಆಲಿಸುತ್ತಿದ್ದವು. ಬೆಟ್ಟಗಳೆ ತೊರೆಗಳೇ ಪಕ್ಷಿಗಳೆ ಮರಗಳೇ ಕಾಡು, ಸುವಾಸನೆ ಬೀರುವ ಹೂವುಗಳ ಚೆಲುವೆ ಸತ್ಯ ಎಂದು ಸಾರಿ ಹೇಳಿ ಸತ್ಯವೇ ಚೆಲುವು ಎಂದು ತೋರಿ ಭೂಮಿಗೆ ಸುಖದ ಅಮೃತವನ್ನು ಬೀರುವುದರೊಂದಿಗೆ ಒಲುಮೆಯೇ ಸುಂದರವಾದ ಅಮೃತದಲ್ಲಿ ಪರಮಾತ್ಮನ ನಿರ್ಮಲವಾದ ಹರುಷ ಇಡೀ ಜಗತ್ತಿಗೆ ಪಸರಿಸುತ್ತಾ ಬರುತ್ತಿದೆ.
ಮಧುವೆ ಬಾರ! ಮುದವತಾರ! ನೀನೆ ದೇವದೂತನು!
ಪರದಚಿಂತೆ ಮರೆಯದಂತೆ ಕಳುಹುವನು ವಿಧಾತನು!
ಬುವಿಯ ಸಿಂಗರಿಸುತ ಬಾರ!
ಪರದ ಬೆಳಕನಿಳೆಗೆ ತಾರ!
ಸೊಬಗೆ ಶಿವನು ಎಂದು ಸಾರ!
ಬಾರ ಶಕ್ತಿದಾಯಕ! ಹಳೆತ ಕೂಡಿ ಹೊಸತು ಮಾಡಿ ಬಾರೆಲೆಋತುನಾಯಕ!
ಹೂವಿನಲ್ಲಿರುವ ಮಕರಂದವೇ ಬಾ, ಅದರ ಅದರಿಂದ ಕೂಡಿದ ಸಂತೋಷವನ್ನು ತರುವಂತೆ ನೀನೇ ದೇವದೂತನಾಗಿ ಬಾ ಬೇರೆಯವರ ಚಿಂತೆ ಬರದ ಹಾಗೆ ಕಳಹುವನು ಬ್ರಹ್ಮನು. ಇದರಿಂದ ಭೂಮಿಯನ್ನು ಸಿಂಗರಿಸುವಂತೆ ಬಾ ಸೂರ್ಯನ ಬೆಳಕನ್ನು ಭೂಮಿಗೆ ತರುವಂತೆ ಇಲ್ಲಿನ ಸೌಂದರ್ಯವೇ ಶಿವನು ಎಂದು ಸಾರಿ ಸಾರಿ ಹೇಳು ಬಾ ಶಕ್ತಿದಾಯಕನೇ ಬಾ ಎಂದು ಹೇಳಿ ಹಳತೆಲ್ಲವನ್ನು ಹೊಸದರೊಂದಿಗೆ ಸೇರಿಸಿ ವಸಂತ ಕಾಲವನ್ನು ತರುವಂತೆ ಬಾರೋ ಋತುನಾಯಕನೇ ಎಂದು ಕವಿ ಹೇಳಿದ್ದಾನೆ.
ಕವಿತೆಯ ಮೂಲಕ ಈ ಜಗಕ್ಕೆ ಸುಗ್ಗಿ ವಸಂತ ಋತುವಿನ ಆಗಮನವನ್ನು ಹೇಗೆ ಬರಮಾಡಿಕೊಳ್ಳಲಾಗುತ್ತಿದೆ ಎಂದು ಕವಿಯು ಹೇಳಿದ್ದಾರೆ
Pingback: 4 - Ondishtu Hasi Mannu Kannada poem summary BCA 1st sem - 4 - ಒಂದಿಷ್ಟು ಹಸಿ ಮಣ್ಣು ಪದ್ಯದ ಭಾವಾರ್ಥ - rvwritting