ಬಾಲದಂಡ ಪಕ್ಷಿ
ಭಾರತವು ಅಪರೂಪದ ಪಕ್ಷಿ ಪ್ರಬೇಧಗಳಿಗೆ ನೆಲೆಯಾಗಿದೆ. 2023ರಲ್ಲಿ ಭಾರತದಲ್ಲಿ 1377 ವಿವಿಧ ಪಕ್ಷಿ ಜಾತಿಗಳು ದಾಖಲಾಗಿವೆ. ಹಾಗೆಯೇ ಇದರಲ್ಲಿ 81 ದೇಶೀಯವಾದವು (Endemic) 212 ಜಾಗತಿಕವಾಗಿ ಅಳಿವಿನ ಹಂಚಿನಲ್ಲಿರುವಂತವು. ಪಕ್ಷಿಗಳು ಜೀವಿ ಪರಿಸರ ವ್ಯವಸ್ಥೆಯೊಳಗೆ, ಆಹಾರ ಸರಪಳಿಯಲ್ಲಿ ಜೊತೆಗೆ ನಿಸರ್ಗದ ಸಮತೋಲನತೆ ಕಾಪಾಡುವಲ್ಲಿ ಬಹುಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತವೆ. ಅದರ ಜೊತೆಗೆ ಅರಣ್ಯದ ಅಭಿವೃದ್ಧಿಯಲ್ಲಿ ಬಹುಮುಖ್ಯವಾಗಿವೆ.
ಭಾರತದಲ್ಲಿ Indian Paradise Flycatcher ಎಂದು ಕರೆಯಲಾಗುವ ಪಕ್ಷಿಯನ್ನು ಕನ್ನಡದಲ್ಲಿ ಬಾಲದಂಡ ಪಕ್ಷಿ, ರಾಜಹಕ್ಕಿ ಎಂತಲೂ ಕರೆಯುತ್ತಾರೆ. ಇದೊಂದು ಮಧ್ಯಮಗಾತ್ರದ ಗುಬ್ಬಚ್ಚಿಯಂತೆ ಕಾಣುವ ಪಕ್ಷಿಯಾಗಿದ್ದು ಭಾರತೀಯ ಉಪಖಂಡ, ಮಧ್ಯ ಏಷ್ಯಾ, ಮಯನ್ಮಾರ್‍ನಲ್ಲಿ ಕಂಡು ಬರುತ್ತದೆ.
ಬಾಲದಂಡ ಪಕ್ಷಿಯನ್ನು ಸಂಸ್ಕøತದಲ್ಲಿ ಅರ್ಜುನಕ ಎಂದು ಕರೆಯಲಾಗುತ್ತದೆ. ಪಕ್ಷಿ ನೋಡಲು ಬಹಳ ಸುಂದರವಾಗಿದ್ದು, ಅದರ ಪ್ರಮೂಖ ಆಕರ್ಷಣೆ ಅದರ ಬಾಲವೇ ಆಗಿದೆ. ಈ ಬಾಲದ ಮೂಲಕವೇ ಹೆಣ್ಣು ಪಕ್ಷಿಯನ್ನು ಆಕರ್ಷಿಸುತ್ತದೆ. ಆದರೆ ಹೆಣ್ಣು ಪಕ್ಷಿಗಳನ್ನು ಉದ್ದದ ಬಾಲವನ್ನು ಹೊಂದಿರುವುದಿಲ್ಲ. ಗಂಡು ಪಕ್ಷಿಗಳು ಕೆಲವು ರುಫಸ್ ಪುಕ್ಕಗಳನ್ನು ಕೆಲವು ಬಿಳಿಗರಿಗಳನ್ನು ಹೊಂದಿರುತ್ತವೆ.
ಇದೊಂದು ವಲಸೆ ಪಕ್ಷಿಯಾಗಿದ್ದು ಉಷ್ಣವಲಯದ ಏಷ್ಯಾದಲ್ಲಿ ಚಳಿಗಾಲ ಕಳೆಯುತ್ತದೆ. ಇವು ತಮ್ಮ ಸಂತಾನೋತ್ಪತ್ತಿಯ ಕಾರ್ಯವನ್ನು ಮೇ ನಿಂದ ಜುಲೈವರೆಗೆ ನಡೆಸುತ್ತವೆ. ಮನುಷ್ಯ ಪ್ರಪಂದಲ್ಲಿರುವಂತೆ ಇವು ಕೂಡ ಏಕಪತ್ನಿತ್ವವನ್ನು ರೂಢಿಸಿಕೊಂಡಿವೆ. ಒಟ್ಟಿಗೆ ಸೇತಿ ತಮ್ಮ ತಮ್ಮ ಗೂಡುಗಳನ್ನು ನಿರ್ಮಿಸಿಕೊಂಡು, ಮೊಟ್ಟೆ ಇಟ್ಟು, ಕಾವು ನೀಡುವ ಜೊತೆಗೆ ಸಂಸಾರ ಹಾಗೆಯೇ ಮರಿಗಳ ಪೋಷಣೆಯಲ್ಲಿ ಒಟ್ಟಾಗಿ ಭಾಗವಹಿಸುತ್ತವೆ. ಗೂಡು ಕಟ್ಟಲು 9 – 12 ದಿನಗಳು, ಮೊಟ್ಟೆಗೆ ಕಾವು ಕೊಡಲು ತೆಗೆದುಕೊಳ್ಳುವ ದಿನಗಳು 14 – 16. ಮತ್ತೆ ಇವು ಗೂಡು ಕಟ್ಟುವಾಗ ಮರದ ಕೊಂಬೆಯ ತುದಿ ಮತ್ತು ಜೇಡರ ಬಲೆಯಂತೆ ಕೂಡಿದ ಕಪ್ ಶೈಲಿಯಲ್ಲಿ ನಿರ್ಮಾಣ ಮಾಡಿಕೊಂಡು ವಾಸ ಮಾಡುತ್ತವೆ.
ಬಾಲದಂಡ ಪಕ್ಷಿಯು ಮಧ್ಯ ಪ್ರದೇಶದ ರಾಜ್ಯ ಪಕ್ಷಿಯಾಗಿದೆ. ಅಲ್ಲಿ ಇದನ್ನು ದೂಧ್‍ರಾಜ್ ಎಂದು ಕರೆಯಲಾಗುತ್ತದೆ. ಈ ಪಕ್ಷಿಯು IUCN ನಲ್ಲಿ Least Concern ಭಾಗಕ್ಕೆ ಬರುತ್ತದೆ. CITES ಅಡಿಯಲ್ಲಿ Not Evaluated ನಲ್ಲಿ ಬರುತ್ತದೆ.