ಉತ್ತರಕುಮಾರ – Uttarakumara
ಉತ್ತರಕುಮಾರ – Uttarakumara ವಿರಾಟರಾಯನ ಅರಮನೆಯಲ್ಲಿ ಪಾಂಡವರು ಇರುವರು ಎಂದು ತಿಳಿದು ಕೌರವ ಎರಡು ವಿಭಾಗವಾಗಿ ವಿರಾಟರಾಯನ ಆಕ್ರಮಣ ಮಾಡಲು ಬರುತ್ತಾನೆ. ಆಗ ಅವರ ಗೋವಿನ ಹಿಂಡಿನ ಮೇಲೆ ಆಕ್ರಮಿಸಿ….
ಕೇಳು ಜನಮೇಜಯ ರಾಜನೇ ದುರ್ಯೋಧನನ ಸೇನೆಯು ಗೋವಿನ ಹಿಂಡನ್ನು ಮುತ್ತಿದರು, ಅದರ ಜೊತೆಗೆ ಭೀಷ್ಮ, ಕರ್ಣ, ದ್ರೋಣ ಮೊದಲಾದವರ ಬಾಣಗಳ ಸುರಿಮಳೆಗೆ ಗೋಪಾಲಕ ಪಡೆಯು ಸಾವಿಗೆ ಹೆದರದೆ ಮುಂದೆ ಬಂದರೂ ಕರ್ಣ, ದುಶ್ಯಾಸನ, ಜಯದ್ರಥ ಮೊದಲಾದವರು ಅವರನ್ನು ಸದೆಬಡಿದರು.
ನಾರಿಮಣಿಯುರ ಮಧ್ಯೆ ಇರುವ ಉತ್ತರನನ್ನು ಕಂಡ ಗೋಪಾಲಕನಿಗೆ ಮುಖದಲ್ಲಿ ಭೀತಿಯುಂಟಾಗಿದೆ, ಎದರ ಜೋರಾಗಿ ಬಡಿದುಕೊಳ್ಳುತ್ತಿದೆ, ಎದೆಯ ಬಡಿತದ ರಭಸಕ್ಕೆ ಗಂಟಲು ಒಣಗಿ ತುದಿನಾಲಗೆಯಲ್ಲಿ ತೊದಲು ನುಡಿ ಬರುತ್ತಿದೆ. ಹೀಗೆ ಹೆದರಿ ಜೋರಾಗಿ ಕೂಗುತ್ತಾ ವಿರಾಟರಾಯನ ಮಗನ ಕಾಲಿಗೆ ಬಿದ್ದು ಕಳವಳದ ಸುದ್ಧಿಯನ್ನು ಹೇಳಿದನು.
ಏಳು ದೊರೆಯೇ ಶೂರನಾಗು, ವೀರನಾಗು ಭೂಪತಿಯಾದ ಕೌರವನು ನಮ್ಮ ಗೋಹಿಂಡನ್ನು ಸೆರೆಹಿಡಿದಿದ್ದಾನೆ. ಭೂಮಿಯ ವಿಸ್ತಾರದಷ್ಟು ಅವನ ಸೇನೆ ಬಂದಿದೆ. ನಿನ್ನ ಸೇನೆ, ಆಳುಗಳೆಲ್ಲರನ್ನೂ ಕರೆಸಿಕೊ, ರಾಣಿವಾಸದ ಗೂಳೆಯನು ತೆಗೆಸು ಎಂದು ಬೇಡಿದನು.
ಎಂದು ಅಬ್ಬರಿಸಿದನು, ನಾನು ಒಬ್ಬ ವೀರ ಎಂದು ಮೀಸೆಯನ್ನುವಬೆರಳಿಂದ ತಿರುವುತ್ತಾ ತನ್ನ ಹರುಷದಲ್ಲಿ ಮೈಮರೆತು ತನ್ನ ಅಕ್ಕ ಪಕ್ಕದಲ್ಲಿದ್ದ ಲಲನೆಯರ ನೋಡಿತನ್ನ ಪೌರುಷದ ಬಗ್ಗೆ ಕೊಚ್ಚಿಕೊಳ್ಳಲು ಮುಂದಾದನು.
ನನ್ನನ್ನು ಕೆಣಕಿದ್ದು ಹೇಗಿದೆ ಎಂದರೆ ಯಮನ ಮೀಸೆಯನ್ನು ಹಿಡಿದೆಳೆದಂತಾಯಿತು, ಭೈರವನ ಕೋರೆಹಲ್ಲನ್ನು ಅಲುಗಿಸಿದಂತಾಯಿತು, ಮೃತ್ಯುದೇವತೆಯ ಎದೆಸೆರಗು ಎಳೆದಂತಾಯಿತು, ಕೇಸರಿ ಅಥವಾ ಸಿಂಹವನ್ನು ಕೆಣಕಿದಂತಾಯ್ತು. ಹುಚ್ಚನಾಗಿ ನನ್ನೊಡನೆ ಕೌರವನುವಕಾಳಗಕೆ ಬಂದು ಕೆಟ್ಟ ಎಂದು ನುಡಿದನು.
ನಾನು ಯುದ್ಧಕ್ಕೆ ಹೋದರೆ ಅಲ್ಲಿ ಯಾರೊಡನೆ ಹೋರಾಡಲಿ? ಕೆಲವರು ಬ್ರಾಹ್ಮಣರು, ಕೆಲವರು ಸಾವಿನಂಚಿನಲ್ಲಿರುವವರು, ಇನ್ನು ಕೆಲವರು ಅಧಮ ಕುಲದಲ್ಲಿ ಜನಿಸಿ ಬಂದವರು, ಇವರು ವೀರರೆನಿಸಿಕೊಂಡವರು. ಇವರನ್ನು ಬಿಟ್ಟರೆ ನನ್ನೊಡನೆ ಹೋರಾಡಲು ಇನ್ನಾರಿದ್ದಾರೆ ಎಂದು ಕೊಬ್ಬಿನಲ್ಲಿ ಮಹಿಳೆಯರ ಮುಂದೆ ಹೇಳಿದನು.
ಏನು ಹೇಳಿದರೆ ಏನು, ಅದರಿಂದ ಫಲವೇನು? ನಿನ್ನೆ ನಡೆದ ಯುದ್ಧದಲ್ಲಿ ತನ್ನ ಸಾರಥಿ ಮಡಿದನು. ಇದರಿಂದ ನಾನು ಕುಂಟನಾದೆ, ನನ್ನ ಕೈ ಮನಗಳಿಗೆ ತಕ್ಕನಾದ ಸಾರಥಿ ಸಿಕ್ಕಿದ್ದರೆ ಕೌರವ ಸೇನೆಗೆ ಹಬ್ಬವನ್ನು ಮಾಡುತ್ತೇನೆ ತನ್ನ ಕೈಯಿಂದ ಎಂದು ಹೇಳಿದ.
ಉತ್ತರನ ಮಾತೆಲ್ಲವನ್ನು ಕೇಳಿದ ಅರ್ಜುನ ಪಾಂಚಾಲೆ ಬಳಿ ಬಂದು ನಾವು ಇನ್ನು ಇಲ್ಲಿರುವುದು ಕ್ಷೇಮವಲ್ಲ ನಮ್ಮ ಕಾಲ ಬಂದಿದೆ. ನಮ್ಮ ರಾಜ್ಯವ ನಾವು ಪಡೆಯಬೇಕು. ಕೌರವರು ಇಲ್ಲಿಗೆ ಬಂದಿರುವುದು ನಮಗೋಸ್ಕರವೇ ಎಂದು ಹೇಳಿದನು
ಅರ್ಜುನ ದ್ರೌಪದಿಗೆ ಉತ್ತರೆ ಬಳಿ ಹೋಗಿ ಹೇಳು’ ಇಲ್ಲಿ ಬೃಹನ್ನಳೆ ಅರ್ಜುನನ ಸಾರಥಿ ಖಾಂಡವ ವನವನ್ನು ಸುಟ್ಟಾಗ ಅಗ್ನಿಯನ್ನು ಕಾದವನಿವನೇ ಎಂದು ಹೇಳಿ ನನ್ನನ್ನು ಈಗಲೇ ಕರೆಸುವಂತೆ ಮಾಡು ಎಂದು ಹೇಳಿದಾಗ ದ್ರೌಪದಿ ಉತ್ತರೆ ಬಳಿ ಬಂದು ಮೇಲಿನಂತೆ ಹೇಳುತ್ತಾಳೆ.
ಅರ್ಜುನನು ರಥವನ್ನು ಅತಿ ವೇಗದಲಿ ಯುದ್ಧ ಭೂಮಿಗೆ ತಂದನು. ಆಗ ಉತ್ತರನು ಎದುರಿಗಿರುವ ಕೌರವ ಸೇನೆಯನ್ನು ತರತರದ ವಾದ್ಯ ಧ್ವನಿಗಳ ಮೊರೆತ ಕೇಳಿ ಸಾಗರದಂತಹ ಸೇನೆಯನ್ನು ನೋಡಿದನು.
ಇದು ಕಾಲಕೂಟದ ತೊರೆಯೋ, ಮಾರಿಯ ಗೂಳೆಯವೋ, ಮೃತ್ಯುವಿನ ಗಂಟಲಿನ ತಾಳಿಗೆಯೋ, ಜವನ ಜಂಗುಳಿಯೋ, ಕಾಲರುದ್ರನ ಹಣೆಗಣ್ಣ ಬೆಂಕಿಯುರಿಯೋ ಆಗಿರಬೇಕು ಎಂದು ಹೆದರಿದ.
ಉತ್ತರ – ಹಸಿದ ಮಾರಿಯ ಗುಂಪಿನಲ್ಲಿ ಕುರಿಯಾಗಿ ನಾನು ಸಿಲುಕಿಂದತಾಗಿದೆ. ಮುಂದಕ್ಕೆ ಕುದುರೆಗಳನ್ನೋಡಿಸಬೇಡ ತಡೆಹಿಡಿ, ಕೈಯಲ್ಲಿರುವ ಚಮ್ಮಟಿಗೆಯನು ಬಿಸುಡು, ನನ್ನಿಂದ ಈ ಕದನ ಸಾಗದು . ಇಂತಹ ಯುದ್ಧವನ್ನು ಮುನ್ನೆಡೆಸುವವನಾರು, ಕೌರವ ಮಹಾಬಲಶಾಲಿ, ನನ್ನಿಂದ ಸಾಧ್ಯವಿಲ್ಲ ರಥವನ್ನು ಹಿಂದಿರುಗಿಸು ಎಂದನು.
ಎಲೆ ಕುಮಾರಾ ಮೊದಲ ಸಲ ನೀಡುವ ಚುಂಬನದಲ್ಲಿ ಹಲ್ಲು ಬಿದ್ದ ಹಾಗೆ , ಯುದ್ಧದಲ್ಲಿ ಒಳಗಾಗುವ ಮೊದಲೆ ಯುದ್ಧದ ಭಯವನ್ನು ತಳೆದೆಯಲ್ಲ ಅಥವಾ ಹೀಗೆ ಅಂಜಬಾರದು. ನಿಮ್ಮ ತಂದೆಯ ಕುಲಕ್ಕೆ ಕೆಟ್ಟ ಹೆಸರು ತರಬೇಡ ಗೆಲುವಿನ ಮನಸ್ಸಿಂದ ಹೋರಾಡು ಎಂದು ಧೈರ್ಯ ಹೇಳುತ್ತಾ ಮುಂದೆ ಮುಂದೆ ಸಾಗಿದನು.
ರಥವು ಯುದ್ಧ ಭೂಮಿಯಲ್ಲಿ ಮುಂದೆ ಮುಂದೆ ಸಾಗಿದಂತೆಲ್ಲಾ ಕುಮಾರನಿಗೆ ಭಯವಾವರಿಸಿ ದೇಹ ಭಾರವೆನಿಸಿತು. ಕೂದಲು ನಿಮಿರಿ ನಿಂತವು, ಮೈ ಬಿಸಿಯಾಯಿತು, ಕೈಕಾಲು ನಡುಗಿದವು, ಬಾಯೊಣಗಿತು, ತುಟಿಯೊಣಗಿ ಸುಕುಮಾರನ ಕಣ್ಣು ಒಳಹೋಗಿ ಇನ್ನು ಇದನ್ನು ನೋಡಲಾರೆನು ಎಂದು ತನ್ನ ಕೈಗಳಿಂದ ಮುಖ ಮುಚ್ಚಿಕೊಂಡನು.
ಏಕೆ ಸಾರಥಿ ರಥವನ್ನು ಮುಂದಕ್ಕೆ ಮುಂದಕ್ಕೆ ತಗೆದುಕೊಂಡು ಹೋಗಿ ನನ್ನ ಗಂಟಲು ಕೊಯ್ಯುತ್ತಿಯೇ? ನಿನಗೆ ಕಣ್ಣು ಹಿಂಗಿ ಹೋಗಿದೆಯಾ? ಕಾಣುತ್ತಿಲ್ಲವೇ ಈ ಮಹಾ ಬಲವನ್ನು. ಇದು ದೇವತೆಗಳಿಗೂ ಅರಿಯಲಾರದ್ದು. ಇದರಿಂದ ನಿನಗೆ ಸ್ವಲ್ಪವೂ ವಿವೇಕವಿಲ್ಲ, ತೆಗೆ, ಮರಳಿ ನಡಿ, ಕುದುರೆಗಳನ್ನು ತಿರುಗಿಸು ಎಂದನು.
ಉತ್ತರನ ಮಾತಿಗೆ ಕಿವಿಗೊಡದೆ ಅರ್ಜುನ ರಥವನು ನಾಲ್ಕೆಂಟು ಅಡಿ ಮುಂದೆ ಹೋಗಲು ರಾಜಕುಮಾರನಿಗೆ ದಿಕ್ಕೇ ತೋಚದಂತಾಗಿ ಈ ಸಾರಥಿ ನನ್ನನ್ನೇ ಕೊಂದನು ಎಂದು ಭಾವಿಸಿ ಮುಂಜೆರಗನ್ನು ಸರಿ ಮಾಡಿಕೊಂಡು ರಥದ ಹಿಂದಕ್ಕೆ ನಿದಾನಕ್ಕೆ ಬಂದು ರಥದಿಂದ ಕೆಳಕ್ಕೆ ಧುಮುಕಿದನು. ಬದುಕಿದೆ ಎಂದು ಓಡುವಾಗ ತಲೆಯ ಕೂದಲು ಬಿಚ್ಚಿ ಹಾರಾಡುತ್ತಿದ್ದರೂ ಲಕ್ಷ್ಯವಿಲ್ಲದೆ ಓಡಿದನು.
ಅರ್ಜುನನು ಇದನ್ನು ಕಂಡನು. ಇವನು ಕೂದಲು ಕೆದರಿಕೊಂಡು ಓಡುತ್ತಿರುವ ಪಾಪಿಯನ್ನು ಹಿಡಿಯಬೇಕು ಎಂದು ರಥದಿಂದಿಳಿದು ಜೋರಾಗಿ ಅಟ್ಟಿಸಿಕೊಂಡು ಓಡಿದನು. ಕೌರವ ಸೇನೆ ಇದನ್ನು ನೋಡಿ ನಗೆಗಡಲಲ್ಲಿ ತೇಲಿತು.
ಉತ್ತರನನ್ನು ಬೆನ್ನಟ್ಟಿ ಅರ್ಜುನ ಹೋದನು. ಇನ್ನು ಮುಂದೆ ಹೋದರೆ ನಿನ್ನ ತಲೆಯನ್ನು ಕಿತ್ತು ಬಿಸುಡುತ್ತೇನೆ ಎಂದು ಹೆದರಿಸಿ ಬೆನ್ನಟ್ಟಿ ಬಂದನು. ಉತ್ತರ ಹಿಂದಿರುಗಿ ನೋಡಿ ಇವನು ನನ್ನ ಸಾರಥಿಯಲ್ಲ ನನ್ನ ಮೃತ್ಯು, ಈ ಪಾಪಿಯನ್ನು ಏಕಾದರೂ ಸಾರಥಿಯನ್ನಾಗಿ ಮಾಡಿಕೊಂಡೆನೋ ಎಂದು ಚಿಂತಿಸುತ್ತಾ ಓಡಿದ.
ಅವನನ್ನು ಹಿಡಿದ ನಂತರ ಹಲ್ಲುಕಿರಿದು ಬಾಯೊಳಗೆ ಬೆರಳಿಟ್ಟು ತಲೆಭಾಗಿ, ಸಾರಥಿ ನನ್ನನ್ನು ಬಿಟ್ಟು ಕಳಿಸು ನಾನು ಮತ್ತೆ ನಿನ್ನ ಹೊಟ್ಟೆಯಲ್ಲಿ ಹುಟ್ಟಿ ಬಂದೆನೆಂದು ತಿಳಿದುಕೊ. ಈ ಒಡ್ಡನ್ನು ಮುರಿಯುವ ವೀರರಿದ್ದಾರೆಯೇ? ಅವರಿವರಿಂದ ನನ್ನನ್ನು ಕೊಲ್ಲಿಸಬೇಡ ನೀನೇ ಕತ್ತರಿಸು ಎಂದು ಕಠಾರಿಯನ್ನು ದೈನ್ಯದಿಂದ ತೋರಿ ಬೇಡಿಕೊಂಡನು.
ಎಲವೋ ಉತ್ತರ ನೀ ನನ್ನ ಸಾರಥಿಯಾಗು ನಡೆ, ಇನ್ನೇನಾದರೂ ಆಟವಾಡಿದೆಯಾ ನಿನ್ನ ಗಂಟಲನ್ನು ಕುಯ್ದು ಬಿಡುತ್ತೇನೆ ಎಂದು ಯುದ್ಧ ಭಯಂಕರನಾದ ಅರ್ಜುನನು ಉತ್ತರನ ಜುಟ್ಟು ಹಿಡಿದು ಹೆಡತಲೆಯನ್ನು ಎಳೆದುಕೊಂಡು ಬಂದು ರಥವನ್ನು ಹತ್ತಿಸಿದನು.